Friday, February 1, 2013

-ಎಚ್.ಎಸ್. ದೊರೆಸ್ವಾಮಿ (ಅತಿಥಿ ಸಂಪಾದಕರು)



ಸಂಪಾದಕೀಯ


'ಸಮಾಜಕಾರ್ಯದ ಹೆಜ್ಜೆಗಳು' ಮಾಸಪತ್ರಿಕೆ ಈ ಬಾರಿ 'ಗಾಂಧೀಜಿ ಮತ್ತು ಸಮಾಜಕಾರ್ಯ'ದ ವಿಶೇಷ ಸಂಚಿಕೆಯಾಗಿ ಹೊರಬಿದ್ದಿದೆ. ಗಾಂಧೀಜಿಯ ದೃಷ್ಟಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಸಮಾಜಕಾರ್ಯವೂ ಅಷ್ಟೇ ಮುಖ್ಯ ಎನಿಸಿತ್ತು.

ಸ್ವಾತಂತ್ರ್ಯ ಇಂದಲ್ಲ ನಾಳೆ ಬಂದೇ ಬರುತ್ತದೆ. ಆದರೆ ಹೀಗೆ ದೊರೆತ ಸ್ವಾತಂತ್ರ್ಯವನ್ನು ಜನ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ. ಬಡತನ, ನಿರಕ್ಷರತೆ, ಕೊಳಕುತನ, ಶೋಷಣೆ ಇವುಗಳಿಂದ ಪಾರಾಗದೆ, ಸ್ವರಾಜ್ಯದ ಫಲ ಎಲ್ಲರಿಗೂ ಸಿಗುವ ಸಂಭವವಿಲ್ಲ. ಅಂತೆಯೇ ಅಸ್ಪೃಶ್ಯತೆ ತೊಲಗಿಸದೆ, ದುಶ್ಚಟಗಳನ್ನು ದೂರಮಾಡದೆ, ಸ್ವದೇಶಿ ಭಾವನೆ ಬೆಳೆಸದೆ ಇದ್ದಲ್ಲಿ ಸ್ವರಾಜ್ಯಕ್ಕೆ ಅರ್ಥವಿಲ್ಲ ಎಂಬುದನ್ನು ಗಾಂಧೀಜಿ ತಿಳಿದಿದ್ದರು.

ಈ ಎಲ್ಲ ಸಾಮಾಜಿಕ ರೋಗಗಳ ನಿವಾರಣೆಯಾಗಬೇಕೆಂದು ಸಮಾಜಕಾರ್ಯಕ್ಕೆ ಸರ್ವ ಸಮರ್ಪಣ ಬುದ್ಧಿಯಿಂದ ತೊಡಗುವವರ ಒಂದು ಪಡೆಯನ್ನೇ ತಯಾರು ಮಾಡಬೇಕೆಂದು ಗಾಂಧೀಜಿ ಬಯಸಿದ್ದರು. ಅವರು ರಚನಾತ್ಮಕ ಕಾರ್ಯಕ್ಕೆ ಮಹತ್ತ್ವ ನೀಡಿದ್ದರು. ಗಾಂಧೀಜಿ ತಮ್ಮ ಆಶ್ರಮದಲ್ಲಿ 18 ರಚನಾತ್ಮಕ ಕಾರ್ಯಗಳನ್ನು ಪ್ರಯೋಗಾರ್ಥವಾಗಿ ಕೈಗೊಂಡರು. ಗಾಂಧೀಜಿಯೊಡನೆ ಆಶ್ರಮವಾಸಿಗಳಾಗಿದ್ದವರಲ್ಲದೆ ಅವರ ಸಹಸ್ರಾರು ಅನುಯಾಯಿಗಳು ತಮ್ಮ ಆಯುಷ್ಯದ ಸಂಪೂರ್ಣ ಸಮಯವನ್ನು ಒಂದಲ್ಲ ಒಂದು ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡರು. ಇವರೆಲ್ಲ ಪೂರ್ಣ ಸಮಯದ ಸಮಾಜಕಾರ್ಯಕರ್ತರಾಗಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಈ 18 ರಚನಾತ್ಮಕ ಕಾರ್ಯಕ್ರಮಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಯದಲ್ಲಿ ತೊಡಗಿಕೊಂಡರೇ ಹೆಚ್ಚು ಮಂದಿ. ಇವರು ಭಾರತದ ಅನೇಕ ಹಳ್ಳಿಗಳಲ್ಲಿ ನೆಲೆಸಿ, ಅಲ್ಲಿಯ ಬಡಜನರಿಗೆ ನೂಲುವುದು, ನೇಯುವುದು, ಬಣ್ಣಹಾಕುವುದು ಮುಂತಾದ ವಿಚಾರಗಳಲ್ಲಿ ತರಬೇತಿ ನೀಡಿ, ಅವರಿದ್ದಲ್ಲಿಯೇ ಉದ್ಯೋಗ ಕಲ್ಪಿಸಿಕೊಟ್ಟರು. ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರುವ ದೃಷ್ಟಿಯಿಂದ, ವಿದ್ಯಾಥರ್ಿಗಳಿಗೆ ಕಲಿಕೆಯ ಜೊತೆಗೆ ಗಳಿಕೆಯನ್ನೂ ಮಾಡಲು ಹೇಳಿಕೊಡುವ 'ವಾಧರ್ಾ' ಶಿಕ್ಷಣ ಪದ್ಧತಿಯೆಂದೇ ಪ್ರಸಿದ್ಧವಾಗಿರುವ ಮೂಲಶಿಕ್ಷಣ ಪದ್ಧತಿಯನ್ನೇ ಜಾರಿಗೆ ತಂದರು. ಈ ಶಿಕ್ಷಣ ನೀಡಲು ಶಿಕ್ಷಣ ತಜ್ಞರಾದ ಜಾಕೀರ್ ಹುಸೇನ್ರ (ಮುಂದೆ ರಾಷ್ಟ್ರಾಧ್ಯಕ್ಷರಾದವರು), ಸಿಂಹಳದ ಆರ್ಯ ನಾಯಕಂ ದಂಪತಿಗಳ ಸಹಕಾರವನ್ನು ಪಡೆದರು.

ಚಮರ್ೋದ್ಯಮದಲ್ಲಿ ಹಿಂದೆ ಹರಿಜನರು ಮಾತ್ರ ತೊಡಗಿಕೊಂಡಿದ್ದರು. ಗಾಂಧೀಜಿ ಬ್ರಾಹ್ಮಣ ಕಾರ್ಯಕರ್ತರಿಗೆ ಸತ್ತ ಪ್ರಾಣಿಗಳ ಚರ್ಮ ಸುಲಿಯುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನೀಡುವ ಶಿಕ್ಷಣ ಕೊಡಿಸಿ ಅವರಿಗೆ ಗೋಪುರಿಯಲ್ಲಿರುವ ಚಮರ್ಾಲಯವನ್ನು ವಹಿಸಿಕೊಟ್ಟರು.

ಜೆ.ಸಿ. ಕುಮಾರಪ್ಪನವರ ನೇತೃತ್ವದಲ್ಲಿ ಗ್ರಾಮೋದ್ಯೋಗ ತರಬೇತಿ ಶಿಬಿರಗಳನ್ನು ನಡೆಸಿ, ಪೂರ್ಣಸಮಯದ ಸಮಾಜಕಾರ್ಯ ಮಾಡುವವರಿಗೆ ಶಿಕ್ಷಣ ನೀಡಲಾಯಿತು. ಹಾಗೂ ಹರಿಜನರಿಗಾಗಿ ವೃತ್ತಿ ಶಿಕ್ಷಣ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು.

ಈ ವಿಶೇಷಾಂಕದಲ್ಲಿ ಗೌರವಾನ್ವಿತ ಶಂಕರ ಪಾಠಕರು 'ಗಾಂಧೀ ವಿಚಾರ ಪರಂಪರೆಯಲ್ಲಿ ಸಮಾಜಸೇವೆ' ಎಂಬ ಮೌಲಿಕವಾದ ಲೇಖನವನ್ನು ಬರೆದಿದ್ದಾರೆ. ಗಾಂಧೀಜಿಯವರ 'ಪಂಚಸ್ವ ಸೂತ್ರ'ದ ಬಗ್ಗೆ ವಿವರಣೆ ನೀಡಿದ್ದಾರೆ.

ಗ್ರಾಮೀಣ ಜನರಲ್ಲಿ ತಾದಾತ್ಮ್ಯತೆ ಹೊಂದಿ ಕೆಲಸಮಾಡುವ ಲೋಕಸೇವಕರು ಮಾತ್ರ ಅವರ ಹೃದಯ ಗೆಲ್ಲಬಲ್ಲರು. ಅವರಲ್ಲಿ ಪರಿವರ್ತನೆ ತರಬಲ್ಲರು ಎಂಬುದು ಸತ್ಯ. ಸವರ್ೋದಯ ದುರೀಣರಾದ ಧೀರೇನ್ ಮಜುಂದಾರರು 'ಹಳ್ಳಿಗರ ಜೊತೆಗೆ ಒಂದಾಗುವ ಪ್ರಯತ್ನದಲ್ಲಿ ನಾನು ಸಂಪೂರ್ಣವಾಗಿ ಅವರಂತೆ ಬಾಳತೊಡಗಿದೆ. ಆಗ ನನ್ನ ಜನರೇ ನನ್ನನ್ನು ಕೊಳಕ, ಶ್ವಪಚ ಎಂದು ದೂರವಿಟ್ಟರು' ಎಂದು ಹೇಳಿಕೊಂಡಿದ್ದಾರೆಂದು ಶಂಕರ ಪಾಠಕರು ಅವರ ಈ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.

ಹಳ್ಳಿಗರ ಜೊತೆಗೆ ಒಂದಾಗುವುದು ಎಂದರೆ ಅವರಂತೆ ಕೊಳಕರಾಗುವುದು, ಶ್ವಪಚರಾಗುವುದು ಖಂಡಿತ ಅಲ್ಲ. ಹಳ್ಳಿಗರನ್ನು ಸುಧಾರಣೆ ಮಾಡುವುದು ನಮ್ಮ ಗುರಿಯಾಗಬೇಕು. ಈ ಸಂದರ್ಭದಲ್ಲಿ ನನಗೆ ಟಿ.ಪಿ. ಕೈಲಾಸಂ ಅವರು ಬರೆದ ಒಂದು ಕಾಲ್ಪನಿಕ ಪ್ರಸಂಗ ನೆನಪಿಗೆ ಬರುತ್ತದೆ. ಮೈಸೂರು ಯುವರಾಜರು ಪ್ರವಾಸ ಕಾಲದಲ್ಲಿ ಒಂದು ಮುಸಾಲ್ಮರ್ ಖಾನೆಯಲ್ಲಿ ತಂಗಿದ್ದರು. ಆ ಊರಿನಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಎಂಬ ಶ್ರೋತ್ರಿಯ ಬ್ರಾಹ್ಮಣರಿದ್ದರು. ಅವರನ್ನು ಯುವ ರಾಜರು ಕರೆಸಿಕೊಂಡು ಅಸ್ಪೃಶ್ಯತೆಯ ಬಗೆಗೆ ಚಚರ್ೆ ನಡೆಸಿದರು. ವೇದೋಪನಿಷತ್ತುಗಳನ್ನೂ, ಶಾಸ್ತ್ರೀಯ ಗ್ರಂಥಗಳನ್ನೂ ಮನನಮಾಡಿದ್ದ ಶಾಸ್ತ್ರೀಗಳನ್ನು ಕುರಿತು 'ಅಸ್ಪೃಶ್ಯತೆ'ಯನ್ನು ವೇದೋಪನಿಷತ್ತುಗಳು, ಶಾಸ್ತ್ರಗಳು ಎತ್ತಿಹಿಡಿಯುತ್ತವೆಯೇ' ಎಂದು ಕೇಳಿದರು. ಶಾಸ್ತ್ರಿಗಳು 'ಖಂಡಿತ ಇಲ್ಲ' ಎಂದರು. 'ಹಾಗಾದರೆ ತಾವು ಅಸ್ಪೃಶ್ಯರನ್ನು ಮೇಲೆತ್ತುವ ಕೆಲಸದಲ್ಲಿ ನೆರವಾಗಲು ಸಾಧ್ಯವೇ' ಎಂದು ಯುವ ರಾಜರು ಕೇಳಿದರು. 'ಖಂಡಿತ ನೆರವಾಗುತ್ತೇನೆ' ಎಂದು ಶಾಸ್ತ್ರಿಗಳು ಉತ್ತರಿಸಿದರು.

ನಾಲ್ಕಾರು ವರ್ಷಗಳ ನಂತರ ಒಮ್ಮೆ ಯುವರಾಜರು ಈ ಹಳ್ಳಿಯಲ್ಲಿ ಮತ್ತೆ ಮೊಕ್ಕಾಂ ಮಾಡಿದರಂತೆ. ಅವರಿಗೆ ಶಾಸ್ತ್ರಿಗಳ ಜ್ಞಾಪಕ ಬಂದು, ಯಾರನ್ನೋ ತಮ್ಮ ಬೆಳಗಿನ ಗಾಳಿ ಸಂಚಾರದ ಕಾಲದಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಊರಲ್ಲಿದ್ದಾರೆಯೇ ಎಂದು ಕೇಳಿದರಂತೆ, ಆಗ ಅವರು 'ಅಲ್ಲಿ ನೋಡಿ ಮಹಾಸ್ವಾಮಿ ಅವರೇ ಸುಬ್ರಹ್ಮಣ್ಯ ಶಾಸ್ತ್ರಿಗಳು. ಅವರು ಈಗ ಹರಿಜನರ ಮಧ್ಯೆ ವಾಸಮಾಡುತ್ತಿದ್ದಾರೆ' ಎಂದರು. ಯುವರಾಜರು ತಮ್ಮ ಕಣ್ಣನ್ನೇ ನಂಬದಾದರು. ತಾವು ಹಿಂದೆ ನೋಡಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಇವರಾಗಿರಲಿಲ್ಲ. ಶಾಸ್ತ್ರಿಗಳು ಕೊಳಕರಾಗಿ ಶ್ವಪಚರಾಗಿ ಅವರಿಗೆ ಕಂಡುಬಂದರು.

ಸುಬ್ರಹ್ಮಣ್ಯ ಶಾಸ್ತ್ರಿಗಳನ್ನು ಕರೆಸಿ ಕೇಳಿದಾಗ ಅವರು 'ನಾನು ನಿಮಗೆ ಮಾತು ಕೊಟ್ಟಂತೆ ಹರಿಜನರ ಸೇವೆಯಲ್ಲಿ ತೊಡಗಿದ್ದೇನೆ' ಎಂದರಂತೆ. 'ನೀವು ಆ ಜನರನ್ನು ಸುಧಾರಿಸಿದ ಪೌರರನ್ನಾಗಿ ಮಾಡಬೇಕೆಂದು ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಂಡಿದ್ದೆ. ನೀವು ಅವರನ್ನು ಸುಧಾರಿಸುವ ಬದಲು ಅವರಂತೆಯೇ ನೀವೂ ಕೊಳಕರಾಗಿದ್ದೀರಿ, ಶ್ವಪಚರಾಗಿದ್ದೀರಿ' ಎಂದು ಹೇಳಿ ವ್ಯಥೆಪಟ್ಟರಂತೆ.

ಸಮಾಜಕಾರ್ಯ ಮಾಡುವವರು ಈ ಮೇಲ್ಕಂಡ ಪ್ರಕರಣವನ್ನು ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.

ಗಾಂಧೀಜಿಯವರ ಚಿಂತನೆಗಳಿಗೆ ಕ್ರಿಯಾತ್ಮಕವಾಗಿ ಸ್ಪಂದಿಸುತ್ತಿದ್ದ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಅಭಿಪ್ರಾಯದಲ್ಲಿ ಸಮಾಜವಾದದ ಮುಂದಿನ ಹಂತವೇ ಸವರ್ೋದಯ ಸಿದ್ಧಾಂತ. ಜೊತೆಗೆ ಗಾಂಧೀಯ ಮಾರ್ಗವು ಆಧುನಿಕ ವೃತ್ತಿಯಾದ ಸಮಾಜಕಾರ್ಯಕ್ಕೆ ತೀರಾ ನಿಕಟವಾದ ಸಂಬಂಧ ಹೊಂದಿದೆ ಮತ್ತು ಈ ಸಂಬಂಧವು ಇನ್ನೂ ಗಾಢವಾಗಬೇಕು ಎಂಬುದೇ ಅವರ ಹಂಬಲವಾಗಿತ್ತು. ಆದುದರಿಂದಲೇ ಅವರು ಇಪ್ಪತ್ತನೆಯ ಶತಮಾನದ ಮಧ್ಯದಲ್ಲಿ ಸವರ್ೋದಯ ಕಾರ್ಯಕರ್ತರನ್ನೂ ವೃತ್ಯ್ತಾತ್ಮಕ ಸಮಾಜಕಾರ್ಯಕರ್ತರನ್ನೂ ಒಂದೆಡೆ ಕೂಡಿಸಿ ವಿಚಾರ ವಿನಿಮಯವನ್ನು ಏರ್ಪಡಿಸಿದ್ದರು. ಸಮಾಜಕಾರ್ಯದ ವೈಜ್ಞಾನಿಕ ನಿಲುವು ಗಾಂಧೀ ಅನುಯಾಯಿಗಳಿಗೂ ಗಾಂಧೀಯ ಮಾರ್ಗದ ಅಧ್ಯಾತ್ಮ ದೃಷ್ಟಿಯು ಸಮಾಜಕಾರ್ಯಕರ್ತರಿಗೂ ಇರಬೇಕೆಂಬುದು ಅವರ ಇರಾದೆಯಾಗಿತ್ತು. ಅವರ ಪ್ರಣೀತ ವಿಚಾರ ಸಂಕಿರಣದ ಫಲವಾಗಿ ಹೊಮ್ಮಿದ ಚಿಂತನೆಗಳಲ್ಲಿ ಕೆಲವನ್ನು 'ಸಮಾಜಕಾರ್ಯದ ಹೆಜ್ಜೆಗಳು' ಈ ವಿಶೇಷ ಸಂಚಿಕೆಯಲ್ಲಿ ಆಯ್ದು ಸೇರಿಸಿರುವುದು ಓದುಗರಿಗೆ ತುಂಬಾ ಉಪಯುಕ್ತವಾಗಿದೆ.

-ಎಚ್.ಎಸ್. ದೊರೆಸ್ವಾಮಿ

(ಅತಿಥಿ ಸಂಪಾದಕರು)

No comments:

Post a Comment