Monday, December 31, 2012

ನೀರಾಳ ಓಣಿ ಬಯಲಾಯಿತು


ನೀರಾಳ ಓಣಿ ಬಯಲಾಯಿತು
           
ರಸ್ತೆಗಳದೇ ಒಂದು ಪ್ರಪಂಚ. ಒಂದೊಂದು ರಸ್ತೆ ಒಂದೊಂದು ತೆರನಾದ ವೈಶಿಷ್ಟ್ಯದಿಂದ ಜನರ ಮನದಲ್ಲಿ ನೆಲೆ ನಿಂತಿರುತ್ತವೆ. ನಮ್ಮೂರಿನಲ್ಲಿ 'ನೀರಾಳ ಓಣಿ' ಎಂಬ ಹೆಸರಿನ ರಸ್ತೆಯೊಂದಿದೆ. ಮಳೆಗಾಲದ ವೇಳೆ ಆ ರಸ್ತೆಯಲ್ಲಿ ಸದಾ ನೀರು ಹರಿಯುತ್ತಿರುವುದರಿಂದ ಆ ಹೆಸರು ಬಂದಿದೆ. ಅಂದರೆ ಅರ್ಧ ಅಡಿಯಷ್ಟು ನೀರು ಹರಿಯುತ್ತಿರುತ್ತದೆ. ಮಳೆ ಸುರಿದಾಗ ಹರಿಯುವಿಕೆ ಅಧಿಕವಾಗಿರುತ್ತದೆ. ಜನ ಮತ್ತು ದನ ಕರುಗಳು ಆ ನೀರೊಳಗಿನ ರಸ್ತೆಯಲ್ಲಿಯೇ ಓಡಾಡಬೇಕು. ಜೊತೆಗೆ ಅದು ತುಂಬ ಕಿರಿದು, ಎತ್ತಿನಬಂಡಿ ಹೋಗುವಷ್ಟು ಮಾತ್ರ  ಅಗಲವಾಗಿದೆ. ಇಕ್ಕೆಲಗಳಲ್ಲಿ ದೊಡ್ಡದಾಗಿರುವ ಏರಿಗಳು, ಆ ಏರಿಗಳ ತುಂಬ ಬೆಳೆದು ನಿಂತಿರುವ ಹೆಮ್ಮರಗಳು, ಮುಳ್ಳುಪೊದೆಗಳು, ಬಳ್ಳಿಗಳು ಒಟ್ಟಿನಲ್ಲಿ ರಸ್ತೆಗೆ ಸೂರ್ಯನ ಕಿರಣಗಳು ಸಹ ಬೀಳದಷ್ಟು ದಟ್ಟವಾಗಿವೆ. ಒಂಟಿ ಹೆಂಗಸು, ಮಕ್ಕಳು ನಡೆದಾಡುವ ರಸ್ತೆಯಂತೂ ಅಲ್ಲ. ಅದು ಎರಡು ಜಿಲ್ಲೆಗಳನ್ನು ಸಂಧಿಸುವ ಗಡಿ ರಸ್ತೆಯೂ ಹೌದು. ನಮ್ಮ ಊರಿನಿಂದ ಪಶ್ಚಿಮ ದಿಕ್ಕಿಗೆ ಒಂದು ಕಿ.ಮೀ ದೂರದಲ್ಲಿರುವ ದಾವಣಗೆರೆ ಜಿಲ್ಲೆಯ ಬುಕ್ಕರನಹಳ್ಳಿಗೆ ಆ ರಸ್ತೆ ಹೋಗುತ್ತದೆ. ನಮ್ಮ ಊರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೋಕಿನ ಕೊನೆಯ ಗ್ರಾಮವಾದ ಹಿರೇಕುಂಬಳಕುಂಟೆ. ತಕ್ಕಮಟ್ಟಿಗೆ ದೊಡ್ಡಗ್ರಾಮ, ಪಕ್ಕದ ಬುಕ್ಕರನಹಳ್ಳಿಯವರು ಟೀ ಕುಡಿಯುವುದರಿಂದ ಹಿಡಿದು ಹಿಟ್ಟಿನ ಗಿರಣಿಯವರೆಗೂ ನಮ್ಮ ಊರಿಗೇ ಬರುತ್ತಾರೆ. 

  ಆ ರಸ್ತೆ ಹೊಲಗಳ ಮಟ್ಟಕ್ಕಿಂತ ಕೆಳಗೆ ಇರುವುದರಿಂದ ಮಳೆಗಾಲದಲ್ಲಿ ಹೊಲಗಳ  ವಡ್ಡುಗಳಲ್ಲಿ ಸಂಗ್ರಹಗೊಂಡ ನೀರನ್ನು ರಸ್ತೆಗೆ ಹರಿಯಬಿಡುತ್ತಾರೆ, ಓಣಿಯ ಎರಡೂ ಬದಿಯ ಭೂಮಿ ಮರಳು ಮಿಶ್ರಿತವಾಗಿರುವುದರಿಂದ ಪಶ್ಚಿಮ ದಿಕ್ಕಿನ ಎಲ್ಲಾ ಹೊಲಗಳ ವಡ್ಡುಗಳಲ್ಲಿನ ನೀರಿನ ಜೊತೆಗೆ ಜೌಗು ನೀರು ಸಹ ಸೇರಿಕೊಂಡು ಕೆಲವೂಮ್ಮೆ ಎಂಟು ತಿಂಗಳುಗಳವರೆಗೂ ಪೂರ್ವ ದಿಕ್ಕಿಗೆ ಹರಿಯುತ್ತದೆ. ಹೀಗೆ ನಮ್ಮೂರ ಕಡೆಗೆ ಬರುವ ನೀರು ನಮ್ಮ ಗ್ರಾಮದ ಸಮೀಪದಲ್ಲಿ ರಸ್ತೆಯ ಎಡಭಾಗಕ್ಕೆ ನಿಮರ್ಿಸಿರುವ ಕಲ್ಲುಚಪ್ಪಡಿಗಳ ಸುರಂಗ ಮಾರ್ಗದ ಮೂಲಕ ಹರಿದು ಉತ್ತರ ದಿಕ್ಕಿಗೆ ಹೋಗುತ್ತದೆ. ವರ್ಷದಲ್ಲಿ ಕನಿಷ್ಟ ಆರು ತಿಂಗಳಾದರೂ ಆ ರಸ್ತೆಯಲ್ಲಿ ನೀರು ತೆಳುವಾಗಿ ಹರಿಯುತ್ತಿತ್ತು. ಬೇಸಿಗೆಯಲ್ಲಂತೂ ಅದು ಎ.ಸಿ ರಸ್ತೆಯಂತೆ ತಂಪಾಗಿ ಇರುತ್ತಿತ್ತು. ಕಾರಣ ಇಕ್ಕೆಲಗಳಲ್ಲಿ ವೀಳೆದೆಲೆಯ ತೋಟಗಳಿದ್ದು ರಸ್ತೆಯ ತುಂಬ ಮರಳು ಹರಡಿರುವುದು.
ಸಂಜೆ ಆರು ಗಂಟೆಯ ನಂತರ ಯಾವ ನರಪಿಳ್ಳೆಯು ಅಲ್ಲಿ ಓಡಾಡುತ್ತಿರಲ್ಲಿಲ್ಲ. ನೀರು ಕೆಸರುಗಳಿಂದ ಕೂಡಿದ ರಸ್ತೆ ಎನ್ನುವುದಕ್ಕಿಂತ ಮಿಗಿಲಾಗಿ ವಿಪರೀತ ದೆವ್ವಗಳ ಕಾಟ ಆ ವೇಳೆಯಲ್ಲಿ ಇರುತ್ತಿತ್ತು ಎನ್ನುವುದು. ಅವು ರಸ್ತೆಯ ತುಂಬ ನೆಗೆದಾಡುತ್ತ ದಾರಿಹೋಕರನ್ನೆಲ್ಲ ಪೀಡುಸುತ್ತಿದ್ದವಂತೆ. ಇಂಥ ದೆವ್ವಗಳ  ಉಪಟಳವನ್ನು ಬಗ್ಗುಬಡಿದವರು ಪ್ರೋಫೆಸರ್ರ ದೊಡ್ಡಪ್ಪನವರಾದ ಸ್ವಟೈನೋರು. ಅವರು ಮಂತ್ರ - ತಂತ್ರ ವಿದ್ಯೆಯನ್ನೆಲ್ಲ ಬಲ್ಲವರಾಗಿದ್ದರಂತೆ. ಅವರೊಮ್ಮೆ ಸಂಜೆಯ ವೇಳೆ ನೀರಾಳ ರಸ್ತೆಯಲ್ಲಿ ಹೋಗುತ್ತಾ, ಮಂತ್ರಗಳನ್ನು ಉಚ್ಚರಿಸುತ್ತ ಕಾಲ ಬೆರಳುಗಳಿಂದಲೇ ಕಲ್ಲು ಹರಳುಗಳನ್ನು ಎತ್ತಿಕೊಳ್ಳುತ್ತಾ, ಅವುಗಳಿಗೆ ಮಂತ್ರಿಸಿ ಮಾರಿಗೊಂದರಂತೆ ಎಸೆಯುತ್ತ ಎಲ್ಲಾ ದೆವ್ವಗಳನ್ನು ಗಡಿಯಾಚೆ ಓಡಿಸಿ ದಿಗ್ಭಂಧನ ರೇಖೆಯನ್ನು ಎಳೆದು ಬಂದರಂತೆ. ಅಂದಿನಿಂದ ಅವುಗಳ ಕಾಟವಿಲ್ಲ ಎಂಬ ಅಜ್ಜಿ ಕತೆಯನ್ನು ಎರಡೂ ಹಳ್ಳಿಯವರು ಈಗಲೂ ಹೇಳುತಿರುತ್ತಾರೆ.                                                       
ನಾನು ಕಂಡಂತೆ ಎತ್ತಿನ ಬಂಡಿಯೊಂದು ಪಶ್ಚಿಮಾಬಿಮುಖವಾಗಿ ಹೋಗುತ್ತಿದ್ದರೆ ಎದುರಿಗೆ ಮತ್ತೊಂದು ಬಂಡಿ ಬರುವಂತಿರಲಿಲ್ಲ. ಒಂದು ವೇಳೆ ಬಂದದ್ದೇ ಆದರೆ ಹಿಮ್ಮುಖವಾಗಿಯೇ ಚಲಿಸಬೇಕಿತ್ತು. ಆ ಕಷ್ಟ ಒದಗುವುದು ಬೇಡವೆಂದು ರಸ್ತೆಯ ಪ್ರಾರಂಭದಲ್ಲಿಯೇ 'ಹೊಯ್...ಬಂಡಿ ಬರ್ತಿದೆ, ಓ...ಹೋಯ್...ಬಂಡಿ ಬರ್ತಿದೆ' ಎಂದು ಕೂಗು ಹಾಕುತ್ತ ಸಿಳ್ಳೆ ಹೊಡೆಯುತ್ತಿದ್ದರು. ಆಗ ಎದುರಿಗೆ ಬರುವ ಎತ್ತಿನ ಬಂಡಿ ಅವಸರದಲ್ಲಿ ಕವಲು ರಸ್ತೆಯ ಜಾಗಕ್ಕೆ ಹೋಗಿ ನಿಂತುಕೊಳ್ಳುತ್ತಿತ್ತು. ಕೂಗು ಹಾಕಿದ ಬಂಡಿ ಹೋದ ಬಳಿಕ ರಸ್ತೆಗೆ ಇಳಿಯುತಿತ್ತು.
ಇಂಥ ರಸ್ತೆಯಲ್ಲಿ ನಡೆದ ಒಂದು ಘಟನೆ ಮಾತ್ರ ನನ್ನ ಮನದಲ್ಲಿ ಮರೆಯದಂತೆ ಉಳಿದುಬಿಟ್ಟದೆ. ಆಗ ನನಗೆ ಹತ್ತು ವರ್ಷ ವಯಸ್ಸು, ಘಟನೆಗೆ ಕಾರಣನಾದವನು ನಮ್ಮೂರ ಹುಡುಗರಿಗೆಲ್ಲ ಪರಮ ವೈರಿಯಾದ ಶ್ರೀ ಹಾಲಸ್ವಾಮಿ ಗುಡಿಯ ಪೂಜಾರಿ. ನಾವು ಗುಡಿಯೊಳಗೆ ಕಾಲಿಟ್ಟರೆ ಸಾಕು ಮೈಮೇಲೆ ಕೆಂಡಬಿದ್ದವನಂತೆ ಎಗರಾಡಿ ನಮ್ಮನ್ನು ಓಡಿಸಿಬಿಡುತ್ತಿದ್ದ. ಅವನ ಮೇಲಿನ ಸಿಟ್ಟಿನಿಂದ ಗುಡಿಯೊಳಗೆ ಅದೆಷ್ಟು ಬಾರಿ ಕಸ ಚೆಲ್ಲಿ ಬಂದಿದ್ದೆವೊ ಗೊತ್ತಿಲ್ಲ. ಅಂಥ ಸಿಡುಕು ಮೂತಿಯ ಪೂಜಾರಿಗೆ ಒಮ್ಮೆ ಅಜ್ಜನಗೌಡರಿಂದ ನಮ್ಮ ಹಾಗೆ ಬೈಗುಳ, ಒದೆ ತಿನ್ನುವ ಪ್ರಸಂಗ ಕೂಡಿಬಂದಿತ್ತು.
ಬ್ರಿಟಿಷರ ಕಾಲದಲ್ಲಿ ಸುತ್ತಲ ಏಳು ಹಳ್ಳಿಗಳಿಗೆ ಗೌಡನಾಗಿದ್ದವನು ನಮ್ಮೂರ ಅಜ್ಜನಗೌಡ. ಒಂದು ದಿನ ನೀರಾಳ ಓಣಿಯ ಅಕ್ಕಪಕ್ಕದ ಏರಿಗಳಲ್ಲಿ ಇರುವ ಬಾಂದ್ಲು ಕಲ್ಲುಗಳು ಇದ್ದಲ್ಲಿಯೇ ಇವೆಯಾ? ಅಥವಾ ಹಿಂದುಮುಂದು ಸರಿದಾಡಿವೆಯಾ? ಎಂಬುದನ್ನು ಪರೀಕ್ಷಿಸಲು ಊರಿನ ಇತರ ಪ್ರಮುಖರೊಂದಿಗೆ ಸಾಗುತ್ತಿದ್ದರು. ಕೆಲಸಬಗಸಿ ಇಲ್ಲದ ನಾಲ್ಕಾರು ಹುಡುಗರಾದ ನಾವೂ ಅವರ ಜೊತೆಯಲ್ಲೇ ಹೋಗುತ್ತಿದ್ದೆವು. ಅಜ್ಜನಗೌಡರಿಗೆ ಕೊನೆಗಾಲದಲ್ಲಿ ಎರಡೂ ಕಣ್ಣುಗಳಿರಲಿಲ್ಲ. ಆದರೂ ಬೆನ್ನು ಬಾಗಿರಲಿಲ್ಲ. ಸುಮಾರು 85 ವರ್ಷದ ಅವರು ಅಜಾನುಬಾಹು ಆಗಿದ್ದರು. ಗೌಡರು ಹೊರ ಹೊಂಟರೆ ಅವರ ಒಂದು ಕೈಯನ್ನು ಪೂಜಾರಿ ತನ್ನ ಹೆಗಲ ಮೇಲಿಟ್ಟುಕೊಂಡು ದಾರಿ ತೋರಿಸುವವನಾಗಿರುತ್ತಿದ್ದ. ತುಂಬ ಕೋಪಿಷ್ಟರಾದ ಗೌಡರಿಗೆ ಅಷ್ಟೇ ಕೋಪಿಷ್ಟನಾದ ಪೂಜಾರಿಯನ್ನು ಜೊತೆ ಮಾಡಿದ್ದರು.
ಎಂದಿನಂತೆ ಆ ದಿನ ಪೂಜಾರಿಯು ಗೌಡರ ಕೈಹಿಡಿದು ಮುನ್ನಡೆಸುವವನಾಗಿದ್ದ. ಗೌಡರು 'ಆ ಕಲ್ಲು ಎಲ್ಲಿದೆ? ಈ ಕಲ್ಲು ಎಲ್ಲಿದೆ'? ಎಂದು ಕೇಳುತ್ತ ತಮ್ಮ ಹೊಲದ ಕಲ್ಲುಗಳು ಕದಲದೆ ಇದ್ದಲ್ಲಿಯೆ ಇವೆಯಾ? ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತ ಹೋಗುತ್ತಿದ್ದರು. ಹಾಗೆ ಹೋಗುತ್ತಿರುವಾಗ ಕುಳ್ಳಗಿದ್ದ ಪೂಜಾರಿಯ ತಲೆಯ ಮೇಲೆ ಹಿಪ್ಪೆ ಕಳ್ಳೆಯ ಒಂದು ರಂಬೆ ಹಾದು ಗೌಡರ ಮುಖಕ್ಕೆ ಪರಚಿಬಿಟ್ಟಿತ್ತು. ಕೂಡಲೆ ವ್ಯಗ್ರರಾದ ಗೌಡರು ಪೂಜಾರಿಯ ತಲೆಗೆ, ಕುತ್ತಿಗೆಗೆ ಪಟ ಪಟ ಚಟ ಚಟ ಅಂತ ಏಟು ಕೊಡತೊಡಗಿದರು. ಪೂಜಾರಿಗೇ ಪೂಜೆ ಆಗುವುದನ್ನು ಕಂಡ ನಮಗೆಲ್ಲ ಒಮ್ಮೆಲೆ ಕಚಗುಳಿ ಇಟ್ಟಂತಾಗಿ ಕುಲುಕುಲು ನಗಲಾರಂಭಿಸಿದೆವು. ಹಿರಿಯರು ಗದರಿಸಿದರೂ ನಗು ತುಟಿಮೀರಿ ನೆಗೆಯುತ್ತಿತ್ತು. ಒದೆ ತಿಂದ ಪೂಜಾರಿ ಪುಕ್ಕ ಮಾತ್ರ ನಾಯಿ ಮರಿ ತರ ಕುಯ್ಞಿ ಕುಯ್ಞಿ ಅನ್ನುತ್ತಿದ್ದನೇ ಹೊರತು ಬಾಯಿಬಿಡಲಿಲ್ಲ. ಇರಲಿ ಇದೆಲ್ಲ ಆ ಕಾಲದಲ್ಲಿ ನಡೆಯೋದೆ. 
ಮನುಷ್ಯರೇ ಸರಾಗವಾಗಿ ನಡೆದಾಡಲು ಸಾಧ್ಯವಾಗದಿರುವ ಆ ರಸ್ತೆಯ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಹಣ ಮಂಜೂರಾಗಿ ಬಂದಿತ್ತು. ಆದರೆ ರಸ್ತೆಯ ಅಕ್ಕ-ಪಕ್ಕದಲ್ಲಿ ಇರುವ ಜಮೀನುಗಳೆಲ್ಲ ಊರಿನ ಗೌಡರುಗಳವೇ ಆಗಿದ್ದರಿಂದ ಸದ್ದಿಲ್ಲದೆ ಯೋಜನೆ ಹಿಂದಕ್ಕೆ ಹೋಯಿತು. ಅಲ್ಲದೆ ಒಂದು ಕಿ.ಮೀ ರಸ್ತೆಯು ಎರಡೂ ಜಿಲ್ಲೆಗಳಿಗೆ ಸೇರಿರುವುದರಿಂದ ನಿರ್ಲಕ್ಷ್ಯತನವೂ ಅದಕ್ಕೆ ಕೂಡಿಕೊಂಡಿತ್ತು. ಆದರೂ ಆ ರಸ್ತೆ ತುಂಬ ಬೇಕಾದುದಾಗಿತ್ತು. ಏಕೆಂದರೆ ಅದರ ಮೂಲಕ ಜಗಳೂರು,ದಾವಣಗೆರೆ, ಉಜ್ಜಿನಿ, ಕೊಟ್ಟೂರು, ಗಾಣಗಟ್ಟೆ ಮುಂತಾದ ಪಟ್ಟಣಗಳಿಗೆ ಹೋಗಲು ಸನಿಹವೂ ಆಗುತ್ತಿತ್ತು.                       
ಅಂಥ ರಸ್ತೆಯ ಮೇಲೆ ಅದೇ ಊರವರಾದ ಸಮಾಜ ವಿಜ್ಞಾನಿ ಪ್ರೋ.ಎಚ್.ಎಂ. ಮರುಳುಸಿದ್ದಯ್ಯನವರ ಕಣ್ಣು ಬಿತ್ತು. ಅವರ ಚಿಕಿತ್ಸಕ ಬುದ್ಧಿ ಕೂಡಲೆ ಕಾರ್ಯಪ್ರವೃತ್ತವಾಯಿತು. ಆ ವೇಳಿಗಾಗಲೇ ಅಜ್ಜನಗೌಡರು ತೀರಿ ಹೋಗಿದ್ದರು. ಉಳಿದ ಊರ ಪ್ರಮುಖರನ್ನು ಅದರಲ್ಲೂ ರಸ್ತೆಯ ಅಕ್ಕ-ಪಕ್ಕದ ಹೊಲದವರನ್ನು ಸೇರಿಸಿ ರಸ್ತೆಯ ಅಗಲೀಕರಣಕ್ಕೆ ನೀವು ಸಹಕರಿಸಬೇಕೆಂದರು. ಮರುಮಾತಾಡದೆ ಎಲ್ಲರೂ ಒಪ್ಪಿಕೊಂಡರು. ಹಿರೇಮಠದ ಗುರುವು ಕೇಳಿದಾಗ ಯಾರು ತಾನೆ ಇಲ್ಲ ಎನ್ನಲು ಸಾಧ್ಯ! ಐನೋರು ನುಡಿದದ್ದು ನಿಜವಾಗುತ್ತೆ ಅದು ಕೇಳಿದ್ದು ಕೊಟ್ಟುಬಿಡುವುದೆ ವಾಸಿ ಎಂಬ ಮನೋಭಾವ ಈಗಲೂ ಹಳ್ಳಿಗರಲ್ಲಿ  ಬೇರೂರಿದೆ. ಈ ಬಗೆಯ ಮೂಢನಂಬಿಕೆಯು ಕೆಲವೊಮ್ಮೆ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗುವುದುಂಟು. ಅದೇನೆ ಇರಲಿ ಪ್ರೋಫೆಸರ್ ವ್ಯಕ್ತಿತ್ವ ಎಲ್ಲರನ್ನು ಜಯಿಸಬಲ್ಲದ್ದಾಗಿತ್ತು ಎನ್ನುವುದಂತೂ ನಿಜ.
ಸರಿ ಇನ್ನೇನು ಪ್ರೋಫೆಸರ್ ಎನ್.ಎಸ್.ಎಸ್ ವಿದ್ಯಾಥರ್ಿಗಳ   ಗುಂಪನ್ನು ಊರಿಗೆ ಕರೆತಂದರು. ಮನೆಗೊಬ್ಬರು ಸಲಿಕೆ, ಗುದ್ದಲಿ, ಹಾರೆ, ಕೊಡಲಿ, ಮಣ್ಣು ಹೋರಲು ಪುಟ್ಟಿ ಇತ್ಯಾದಿಗಳನ್ನು ಹಿಡಿದು ಬರಬೇಕು ಎಂದು  ಪ್ರೀತಿಯ ಆದೇಶವನ್ನು ರವಾನಿಸಿದರು. ತಡವಿಲ್ಲದೆ ವಿದ್ಯಾಥರ್ಿಗಳ ಜೊತೆ ಊರವರು ಬಂದು ಸೇರಿದರು. ಪ್ರೋಫೆಸರ್ ತಾವೇ ಮುಂದೆ ನಿಂತು ಗುದ್ದಲಿ ಹಿಡಿದು ಹಲವು ದಶಕಗಳಿಂದ ಭೇದಿಸಲು ಸಾಧ್ಯವಾಗದಂತಹ ಗೌಡರ ಏರಿಗಳನ್ನು ಕದಲಿಸ ತೊಡಗಿದರು. ಗೌಡರ ದಬ್ಬಾಳಿಕೆಯಿಂದ ಬೇಸತ್ತಿದ್ದ ಕೆಲವರು ಜಾಸ್ತಿ ಜಾಸ್ತಿಯಾಗಿ ಜಮೀನನ್ನು ರಸ್ತೆಗೆ ಕಬಳಿಸತೊಡಗಿದರು. ಇದನ್ನು ಕಂಡ ಕೆಲವು ಭೂಮಾಲೀಕರು 'ನಮ್ಮ ಹೊಲದ ಏರಿಯನ್ನೆ ಜಾಸ್ತಿ ಕಡಿಬ್ಯಾಡ್ರಪ್ಪೊ ರಸ್ತೆ ಡೊಂಕ ಆಗುತ್ತೆ' ಎನ್ನುತ್ತಿದ್ದರು. ತಮ್ಮ ಜಮೀನನ್ನು ಜಾಸ್ತಿ ಅಗೆದುಬಿಟ್ಟಾರು ಎನ್ನುವ ಆತಂಕದಲ್ಲಿ ರಸ್ತೆ ನೇರಕ್ಕರಲಿ ಎಂಬ ಜಾಣ್ಮೆಯ ಪೂಸಿ ಮಾತು ಆಡತೊಡಗಿದರು.
ಶತಮಾನಗಳಿಂದ ರಸ್ತೆಯನ್ನೇ ಕಿರಿದಾಗಿಸಿದ್ದ ಗೌಡರ ಮೇರೆಯ ಕಲ್ಲುಗಳು ಹೇಳಹೆಸರಿಲ್ಲದಂತೆ ನೆಲಕ್ಕುರುಳಿದವು. ಹದಿನೈದು ದಿನಗಳು ಕಳೆಯುವುದರೊಳಗೆ ಪ್ರೋಫೆಸರ್ ಮುಂದಾಳತ್ವದಲ್ಲಿ ಆ ರಸ್ತೆಯು ಎರಡು ಎತ್ತಿನ ಬಂಡಿಗಳು ಓಡಾಡುವಷ್ವು ಅಗಲವಾಯಿತು. ಬುಕ್ಕರನಹಳ್ಳಿ ಮತ್ತು ಹಿರೇಕುಂಬಳಕುಂಟೆ ಊರುಗಳಿಂದ ಮಕ್ಕಳು, ಹೆಂಗಸರು, ಮುದುಕರು ಬದಲಾದ ರಸ್ತೆಯನ್ನು ನೋಡಲು ತಂಡ ತಂಡವಾಗಿ ಬರುವುದು ಸಾಮಾನ್ಯವಾಗಿತ್ತು. ಹೀಗೆ ಬಂದವರೆಲ್ಲಾ ನೀರಾಳ ಓಣಿ ಬಯಲಾಗಿದ್ದನ್ನು ಕಂಡು ಬೆರಗಾಗಿ 'ನಮ್ಮಪ್ಪ ಸ್ವಾಮಿ(ಪ್ರೋಫೆಸರ್) ನೀನಾಗತ್ಗೆ ಮಾಡಿದೆ ಕಣಪ್ಪ! ನೀನ್ ಮುಂದೆ ನಿಂತಿದ್ರಿಂತ ಗೌಡ್ರುಗಳು ಉಸಿರು ಬಿಡ್ಲಿಲ್ಲ, ನಿನ್ ಹೆಸರು ಹೇಳ್ಕೊಂಡು ಓಡಾಡ್ತಿವೊ ತಂದೆ' ಎಂದು ಸ್ಮರಿಸುವುದು, ಹೊಗಳುವುದು ಬಹುದಿನಗಳವರೆಗೂ ನಡೆದಿತ್ತು.


 ಹೀಗೆ ಬಯಲಾದ ರಸ್ತೆಗೆ ಬಸ್ಸು ಓಡಿಸಲು ಕೆ.ಎಸ್.ಆರ್.ಟಿ.ಸಿ.ಗೆ ಮನವಿ ಮಾಡಿದ್ದು ಸಾರ್ಥಕವಾಗಲಿಲ್ಲ. ಆದರೆ ಮೂರು ವರ್ಷಗಳ ನಂತರ ಖಾಸಗಿ ಬಸ್ಸು ಒಡೆಯನಾಗಿದ್ದ ಪ್ರೋಫೆಸರ್ ವಿದ್ಯಾಥರ್ಿಯೊಬ್ಬ ನೀರಾಳ ಓಣಿಯಲ್ಲಿ ಅಂದರೆ ನಮ್ಮ ಊರಿನ ಮೂಲಕ ದಾವಣಗೆರೆಯಿಂದ ಕೂಡ್ಲಿಗಿಗೆ ಬಸ್ಸು ಓಡಿಸತೊಡಗಿದ. ಮೊದಲ ದಿನಗಳಲ್ಲಿ ಬೆಳೆದು ಚಾಚಿದ್ದ ರಂಬೆ ಕೊಂಬೆಗಳಿಂದ ಬಸ್ಸಿನ ಬಣ್ಣವೆಲ್ಲ ತರಚಿ ಹೋಯಿತು. ಮುಳ್ಳುಕೊನೆಗಳಿಂದ ಕಿಟಕಿ ಪಕ್ಕ ಕುಳಿತ್ತಿದ್ದವರ ಮೀಸೆ, ಗಡ್ಡ, ಶಟರ್ುಗಳು ಕಿತ್ತುಕೊಂಡವು ಎಂಬ ಸುದ್ದಿ ಹರಿದಾಡುತ್ತಿತ್ತು. ಟಾಪ್ ನಲ್ಲಿದ್ದ ಹೂವಿನ ಮತ್ತು ತರಕಾರಿಯ ಮೂಟೆಗಳು ಮರದ ಕೊಂಬೆಗಳಲ್ಲಿ ಸಿಕ್ಕಿಕೊಂಡು ಬೇತಾಳನಂತೆ ಜೋತಾಡುತ್ತಿದ್ದವಂತೆ ಎಂಬುದು ತಮಾಷೆಯ ಘಟನೆಗಳಾಗಿದ್ದವು.                                                        
ಹೀಗಿದ್ದರೂ ರಸ್ತೆಗೆ ಇಳಿಬಿದ್ದ, ಚಾಚಿದ ರಂಬೆ-ಕೊಂಬೆಗಳನ್ನು ಸವುರಲು ಎರಡೂ ಊರುಗಳಲ್ಲಿ ಯಾರು ಮನಸ್ಸು ಮಾಡಲಿಲ್ಲ. ಏಕೆಂದರೆ ಗೌಡರುಗಳಿಗೆ ಹೆದರಿಕೊಂಡು. ಕೊನೆಗೆ ಪ್ರೋಫೆಸರ್ ರವರೆ ಬೆಂಗಳೂರಿಂದ ಬಂದು ಊರವರ ಮತ್ತು ಶಾಲೆ ಹುಡುಗರಾದ ನಮ್ಮನ್ನು ಸೇರಿಸಿಕೊಂಡು ಆ ಕಾರ್ಯವನ್ನು ಪೂರೈಸಬೇಕಾಯಿತು.
ತಾವು ನಂಬಿರುವ ಮತ್ತು ಮಾಡಿ ತೋರಿಸಿರುವ ಗಾಂಧೀಜಿಯವರ ಮಾದರಿ ಗ್ರಾಮಗಳ ಕನಸನ್ನು ಏಕೆ ನನ್ನ ಜನರು ಅರ್ಥಮಾಡಿಕೊಳ್ಳುತ್ತಿಲ್ಲವೆಂಬ ಚಿಂತೆ ಪ್ರೋಫೆಸರನ್ನು ಬಹುವಾಗಿ ಕಾಡಿರಬೇಕು. ಅದಕ್ಕಾಗಿಯೇ ಅವರು ಪರಾವಲಂಬನೆ ಎಂಬ ಕಸವನ್ನು ಸಮಾಜಕಾರ್ಯದ ಮೂಲಕ ಗುಡಿಸಲು ನಿರಂತರವಾಗಿ ಶ್ರಮಿಸುವವರಾಗಿದ್ದಾರೆ. ಅದಕ್ಕೆ ವರವೆಂಬಂತೆ ವಿಶಾಲವಾದ ಹೃದಯ, ಪ್ರೀತಿ, ಮಮತೆ, ವಾತ್ಸಲ್ಯಗಳು ತುಂಬಿದ ಅವರ ಮಾತು ಮತ್ತು ನಡವಳಿಕೆಗಳು ಎಂಥವರಿಗೂ ಇಷ್ಟವಾಗಿಬಿಡುತ್ತವೆ. ಅಂತಹ ಸಹಜ ಪ್ರೀತಿಯೆ ನೀರಾಳೋಣಿಯಂತಹ ಸಂಕೀರ್ಣ ಕಾರ್ಯವನ್ನು ಯಶಸ್ವಿಗೊಳಿಸಿತು ಎಂದರೆ ಅತಿಶಯೋಕ್ತಿ ಆಗಲಾರದು. ಅವರ ಸಮಾಜ ಕಾರ್ಯದ ಮೂಲ ಆಶಯವೆಂದರೆ: ಸಕರ್ಾರ ಅಥವಾ ಮತ್ತಾರೋ ಮಾಡುತ್ತಾರೆ ಎಂಬ ಕಲ್ಪನೆಯಿಂದ ಹೊರಬಂದು ನಮ್ಮ ಹಳ್ಳಿಯ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಎಂಬ ಸ್ವಾವಲಂಬನೆಯ ಸಂದೇಶವಾಗಿದೆ. ಆ ನಿಟ್ಟಿನಲ್ಲಿಯೇ ಅವರು ಅಸಂಖ್ಯೆ ವಿದ್ಯಾಥರ್ಿಗಳನ್ನು ತರಬೇತಿಗೊಳಿಸಿದ್ದಾರೆ. ಅಂತಹ ಶಿಷ್ಯರುಗಳ ಪರಿಶ್ರಮ ಪ್ರಸ್ತುತ ಸಮಾಜಕಾರ್ಯಕ್ಕೆ ಉತ್ತಮ ಫಸಲನ್ನು ನೀಡುತ್ತಿದೆ. ಬಹುಶಃ ಹಿರೇಮಠದ ಗುರುವಿಗೆ ದೊರೆತ ಬಹುದೊಡ್ಡ ಬಹುಮಾನವೂ ಇದೇ ಆಗಿದೆ. ಏಕೆಂದರೆ ಯಾವುದೇ ಪ್ರಶಸ್ತಿ ಮತ್ತು ಗೌರವಗಳಿಗಾಗಿ ಲಾಬಿಗಿಳಿಯದ ಇಂತಹ ನಿಸ್ವಾರ್ಥ ಸಮಾಜ ಸೇವಕ ಸಕರ್ಾರದ ಕಣ್ಣಿಗೆ ಕಾಣುವುದಾದರೂ ಯಾವಾಗ?

                                         ಡಾ.ಎಂ.ಹಾಲಪ್ಪ ಕುಂಬಳಕುಂಟೆ,
                                         ಕನ್ನಡ ಉಪನ್ಯಾಸಕರು,
                                         ಸಕರ್ಾರಿ ಪದವಿ ಪೂರ್ವ ಕಾಲೇಜು,
                                         ಹುಳಿಯಾರು-ಕೆಂಕೆರೆ (ಪೋ),
                                         ಚಿ.ನಾ.ಹಳ್ಳಿ (ತಾ),
                                         ತುಮಕೂರು (ಜಿ).
                                         ಮೊ-974284366

No comments:

Post a Comment