ಪೊರಕೆ ಪ್ರೋಫೆಸರ್
ಸಾಹಿತ್ಯದ ವಿದ್ಯಾಥರ್ಿಯಾಗಿದ್ದು ಕವನ, ಕಾದಂಬರಿ ರಚಿಸುವಾಗಲೆ ಸಮಾಜ ಕಾರ್ಯದ ಅಧ್ಯಯನ ಕೈಗೊಳ್ಳುವ ತಿರುವು ಒದಗಿಬಂದಿತು. ಪರಿಣಾಮವಾಗಿ ಅದರಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಸಂಶೋಧನೆಯನ್ನು ಕೈಗೊಂಡರು. ನಂತರ ಕನರ್ಾಟಕದಲ್ಲಿ ಸಮಾಜಕಾರ್ಯ ಮತ್ತು ಅದರ ಅಧ್ಯಯನಗಳಿಗೆ ಹೊಸ ಕಸುವು ದೊರೆಕಿತು. ಮಾತ್ರವಲ್ಲ ಆ ವಿಷಯದ ಕೃತಿಗಳನ್ನು ಕನ್ನಡದಲ್ಲಿ ಬರೆದು; ಅನುವಾದಿಸಿ ವಿದ್ಯಾಥರ್ಿಗಳಿಗೆ ಮತ್ತು ಅಧ್ಯಯನಕಾರರಿಗೆ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಡಾ. ಎಚ್.ಎಂ. ಮರುಳುಸಿದ್ಧಯ್ಯನವರದು.
1986 ರಲ್ಲಿ ನಾನು ಏಳನೇತರಗತಿಯ ವಿದ್ಯಾಥರ್ಿಯಾಗಿದ್ದೆ, ಆ ವೇಳೆ ನಮ್ಮ ಹಳ್ಳಿಗೆ ಬದಲಾವಣೆಯ ಹೊಸಗಾಳಿ ಬೀಸಲಾರಂಭಿಸಿತ್ತು. ಊರಿನ ಚರಂಡಿಗಳು, ಬಚ್ಚಲ ಗುಂಡಿಗಳು ಹಾಗೂ ಕಸ ತುಂಬಿದ ಬೀದಿಗಳು ಸ್ವಚ್ಚಗೊಳ್ಳುವುದರ ಜೊತೆಗೆ ಜನರ ಅಂತರಂಗದಲ್ಲಿ ಸಮಾಜ ಕಾರ್ಯದ ಬೀಜ ಬಿತ್ತುವ ಕೆಲಸ ನಡೆಯಿತು. ನಮ್ಮೂರನ್ನು ನಾವೇ ಶುಚಿಗೊಳಿಸಿಕೊಳ್ಳಬೇಕು ಎಂಬ ಸ್ವಾವಲಂಬನೆಯ ಪಾಠ ಹೇಳುತ್ತಿದ್ದವರು ಅದೇ ಊರವರಾದ ಮತ್ತು ಸುತ್ತಲ ಹಳ್ಳಿಯವರಿಂದ ಪೊರಕೆ ಪ್ರೋಫೆಸರ್ ಎಂದು ಕರೆಯಲ್ಪಡುತ್ತಿದ್ದ ಸಮಾಜ ವಿಜ್ಞಾನಿ ಡಾ. ಎಚ್.ಎಂ.ಎಂ ರವರು.
ಹುಟ್ಟಿದ್ದು ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಕುಂಟೆ ಎಂಬ ಕುಗ್ರಾಮದಲ್ಲಿ, ಜಾತಿಯಲ್ಲಿ ಜಂಗಮ ಕುಲವಾದರು ಅವರು ಉಸಿರಾಡಿದ್ದು ಸಮಾಜ ಕಾರ್ಯದಲ್ಲಿ. ಎಷ್ಟು ತೀವ್ರವಾಗಿ ಅದರಲ್ಲಿ ತಮ್ಮನ್ನು ತೊಡಗಿಸಿ ಕೊಡಿದ್ದರೆಂದರೆ, ಒಂದು ಸಲ ಊರಿನ ಮಧ್ಯ ಇರುವ ಪೀರ್ಲದೇವರ (ಮೋಹರಂ) ಗುಡಿಯ ಮುಂದೆ ಹಾದು ಹೋಗುತ್ತಿದ್ದರು. ಆ ವೇಳೆ ನಾಯಿಯೊಂದು ಗುಡಿಯ ಮುಂಭಾಗದಲ್ಲಿ ಮಲವಿಸರ್ಜನೆ ಮಾಡಿದ್ದು ಅವರ ಕಣ್ಣಿಗೆ ಬಿತ್ತು. ಕೂಡಲೆ ತಮ್ಮ ಎರಡೂ ಕೈಗಳಿಂದ ಅದನ್ನು ಬಾಚಿ ಎತ್ತಿಕೊಂಡು ತಿಪ್ಪೆಯ ದಾರಿ ಹಿಡಿದರು. ಗುಡಿಯಲ್ಲಿ ಹರಟುತ್ತಿದ್ದವರು, ಊರ ಬಾಗಿಲ ಕಟ್ಟೆಯ ಮೇಲೆ ಕುಳಿತವರು 'ಅಯ್ಯೋ.... ಥು., ಈ ಪ್ರೋಫೆಸರ್ ಈಗೀಗ ಏನೇನೋ ಮಾಡ್ತಿದರೆ' ಎಂದುಕೊಳ್ಳುತ್ತಿರುವಾಗಲೆ ಅಲ್ಲೇ ನಿಂತಿದ್ದವರು 'ಛೆ... ಇಲ್ಲಿ ಹಾಕಿ' ಎಂದು ಸಗಣಿ ಪುಟ್ಟಿಯಲ್ಲಿ ಆ ಮಲವನ್ನು ಹಾಕಿಸಿಕೊಂಡರು. ಬಳಿಕ ಅವರ ಕೈಗಳಿಗೆ ನೀರು ಸುರಿದರು.
ತಾವು ಕೆಲಸ ಮಾಡುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಶೌಚಾಲಯಗಳು ಒಮ್ಮೆ ಶುಚಿಗೊಳಿಸುವವರಿಲ್ಲದೆ ದುನರ್ಾತ ಹೊಡೆಯುತ್ತಿದ್ದವಂತೆ. ಆಗ ಪ್ರೋ.ಎಚ್.ಎಂ.ಎಂ ಪೊರಕೆ, ಬ್ರಷ್, ಬ್ಲೀಚಿಂಗ್ ಪೌಡರ್ಗಳನ್ನು ಹಿಡಿದು ತೊಳೆಯತೊಡಗಿದರು. ಕೂಡಲೆ ವಿದ್ಯಾಥರ್ಿಗಳೆಲ್ಲ ಅವರ ಜೊತೆ ಕೈಜೋಡಿಸಿದರು. ಇವು ಎರಡು ಉದಾಹರಣೆಗಳು ಮಾತ್ರ. ಇಂಥ ಕಾರ್ಯ ವೈಖರಿಯೇ ಅವರ ಜಾಯಮಾನವಾಗಿದೆ. ಸಮಾಜಕಾರ್ಯ ಎಂದರೆ ತರಗತಿಯ ಒಳಗೆ ಮಾತ್ರ ಕಲಿಯುವುದಲ್ಲ ಸಮುದಾಯದೊಳಗೆ ನಿಂತು ಕೈಮುಟ್ಟಿ ಕಾಯಕ ಮಾಡುವುದು ಎನ್ನುವುದನ್ನು ನಡೆದು ತೋರಿಸಿದರು.
ಕಸಗೂಡಿಸುವ, ಕೈಯಲ್ಲಿ ಹೊಲಸು ಎತ್ತುವ, ಶೌಚಾಲಯ ತೊಳೆಯುವ ಪ್ರೋಫೆಸರನ್ನು ಹಬ್ಬಗಳಲ್ಲಿ ಭಿನ್ನ ತೀರಿಸಲಿಕ್ಕೆ ಕರೆಯಲು ಊರಲ್ಲಿರುವ ಅಧಿಕ ಸಂಖ್ಯೆಯ ಲಿಂಗಾಯಿತರು ಹಿಂದೇಟು ಹಾಕತೊಡಗಿದರು. ಅದಾವುದಕ್ಕೂ ಹಿಂಜರಿಯದೆ ಶಾಲಾ ವಿದ್ಯಾಥರ್ಿಗಳಾದ ನಮ್ಮನ್ನು ಸೇರಿಸಿಕೊಂಡು ಮಣಿಗಾರರ ಕೇರಿಯಿಂದ ಮೇಲ್ಜಾತಿಯವರ ಕೇರಿಯವರೆಗೆ ಪೊರಕೆ ಹಿಡಿದು ಇಡೀ ಊರಿನ ಕಸವನ್ನೆಲ್ಲ ಗುಡಿಸಿಬಿಡುತ್ತಿದ್ದರು. ಚರಂಡಿಗಳನ್ನು ಶುಚಿಮಾಡಿ, ರಸ್ತೆಯ ಗುಂಡಿಗಳನ್ನೆಲ್ಲ ಮುಚ್ಚಿ ಅದರ ಇಕ್ಕೆಲಗಳಲ್ಲಿ ಗಿಡ ನೆಡುವವರೆಗೂ ಅವರು ವಿಶ್ರಮಿಸುತ್ತಿರಲಿಲ್ಲ. ಅಂದು ನಾಟಿ ಮಾಡಿದ ಗಿಡಗಳಿಂದು ಹೆಮ್ಮರವಾಗಿ ಬೆಳೆದು ನಿಂತಿವೆ.
ಅವರು ಊರಲ್ಲಿ ಇದ್ದಷ್ಟು ದಿನ ಶಾಲಾ ಹುಡುಗರಿಗೆಲ್ಲ ಹಬ್ಬದ ವಾತಾವರಣ. ಏಕೆಂದರೆ ಅವರ ಮೃದು ಹಾಸ್ಯದ ಮಾತುಗಳು ನಮ್ಮನ್ನು ಚುಂಬಕದಂತೆ ಆಕಷರ್ಿಸುತ್ತಿದ್ದವು. ಆತ್ಮೀಯವಾಗಿ ನಮ್ಮ ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಿದ್ದುದು ಅಪ್ಯಾಯಮಾನವಾಗಿತ್ತು. ನಮಗೂ ಒಂದು ವ್ಯಕ್ತಿತ್ವ ಇದೆ; ಏನಾದರೂ ಉತ್ತಮ ಕಾರ್ಯ ಮಾಡಬಲ್ಲೆವು ಎಂಬ ಭಾವನೆ ಅವರ ಸನಿಹದಲ್ಲಿ ಇದ್ದಾಗ ಮೂಡುತ್ತಿತ್ತು. ಇಂಥ ಸಹಜ ಪ್ರೀತಿಯೆ ಅವರಿಗೆ ಇಂದು ಅಸಂಖ್ಯಾತ ಶಿಷ್ಯ ಸಮುದಾಯವನ್ನು ತಂದುಕೊಟ್ಟದೆ. ಅವರ ಪ್ರೀತಿ-ಮಮತೆಗಳು ಕೇವಲ ತೋರಿಕೆಯವಾಗಿರದೆ ಅಂತರಂಗದ ಅಭಿವ್ಯಕ್ತಿ ಆಗಿದ್ದವು. ಆ ಸೊಗಸು ಅವರ ಕ್ರಿಯೆ ಹಾಗು ಮಾತು ಎರಡರಲ್ಲೂ ವ್ಯಕ್ತವಾಗುತ್ತಿತ್ತು.
ಸಣ್ಣಶಾಲೆಯ ಹುಡುಗರು ಮಾತ್ರವಲ್ಲ ಕಾಲೇಜಿನ ವಿದ್ಯಾಥರ್ಿಗಳು ಬೀದಿಗುಡಿಸುವ ತನ್ನ ಕಾರ್ಯಕ್ಕೆ ಜೊತೆಯಾಗಿದ್ದಾರೆ ನೋಡಿ ಎಂಬಂತೆ ಎನ್ಎಸ್ಎಸ್ ತಂಡಗಳನ್ನೆ ಕರೆತಂದು ನಮ್ಮ ಊರು ಮಾತ್ರವಲ್ಲ ಪಕ್ಕದ ಊರುಗಳಿಗೂ ಹರಡಿಬಿಟ್ಟರು ಪೊರಕೆಯ ಫರಾಕ್ನ್ನು.
ಹೀಗೆ ಪ್ರತಿದಿನ ಊರಿನಲ್ಲಿ ವಿವಿಧ ಸ್ವಚ್ಚತಾ ಕಾರ್ಯಗಳನ್ನು ಮುಗಿಸಿ ಸಂಜೆಯ ವೇಳೆ ಎನ್ಎಸ್ಎಸ್ ಶಿಬಿರಾಥರ್ಿಗಳು ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರುತ್ತಿತ್ತು. ಆ ಕಾರ್ಯಕ್ರಮದ ಮಧ್ಯ ಬಂದಂತಹ ಅತಿಥಿಗಳ [ನನಗೆ ನೆನಪಿರುವಂತೆ ಆಗ ಬಂದ ಅತಿಥಿಗಳು ಎಂ.ವೈ.ಘೋರ್ಪಡೆ, ಎಂ.ಪಿ.ಪ್ರಕಾಶ, ಹಿರೇಹಡಗಲಿಯ ಮಾಜಿ ಶಾಸಕ ಶ್ರೀ ಅಂದಾನಪ್ಪ, ಗೋರುಚ, ಡಾ.ಚಿಮೂ, ರಾ.ನಂ.ಚಂದ್ರಶೇಖರ್ ಮುಂತಾದವರು] ಭಾಷಣ, ಕೊನೆಯಲ್ಲಿ ಪ್ರೋಫೆಸರ್ ಮಾತಾಡುತ್ತಿದ್ದರು.
ಇಂಥ ಕಾರ್ಯಕ್ರಮದಲ್ಲಿ ಒಂದು ದಿನ ಪ್ರೋ.ಎಚ್.ಎಂ.ಎಂ ಶರಣರ ವಚನಗಳು ಮತ್ತು ಅವರ ಕಾಯಕ ನಿಷ್ಠೆಯಿಂದ ಹಿಡಿದು ಮಹಾತ್ಮ ಗಾಂಧೀಜಿ, ಜಯಪ್ರಕಾಶನಾರಾಯಣರವರೆಗೆ ಮಾತನಾಡುತ್ತಿದ್ದರು. ಆ ವೇಳೆ ತಾವು ಕಂಡ ಒಂದು ಘಟನೆಯನ್ನು ವಿವರಿಸಿದರು.
ಅವರೊಮ್ಮೆ ಸಮಾಜ ಕಾರ್ಯದ ರಾಷ್ಟ್ರೀಯ ಸಮ್ಮೇಳನಕ್ಕೆಂದು ಒಂದು ದೊಡ್ಡನಗರಕ್ಕೆ (ಹೆಸರು ನೆನಪಿಲ್ಲ) ಹೋಗಿದ್ದರಂತೆ. ಆಗ ವಾಸ್ತವ್ಯಕ್ಕಾಗಿ ಕೊಠಡಿಯೊಂದನ್ನು ನೀಡಲಾಗಿತ್ತು. ಅದರಲ್ಲಿ ಬೇರೆ ಬೇರೆ ಭಾಗಗಳಿಂದ ಬಂದ ಒಟ್ಟು ಆರು ಜನ ಸಮಾಜ ವಿಜ್ಞಾನಿಗಳು ತಂಗಿದ್ದರಂತೆ, ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದರು. ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಅವರು ಮಲಗಿದ್ದ ಕೋಣೆಯಲ್ಲಿ 'ಪರಾ...ಪರಾ...ಪರಾ.,' ಎಂದು ಸದ್ದು ಬರಲು ಶುರುವಾಯಿತು. 'ಇದೇನು? ಮುಂಗೋಳಿಯ ಕೂಗಿನ ಬದಲಿಗೆ ಹೆಗ್ಗಣ ಕೆರೆಯುತ್ತಿದೆಯೆ?' ಎಂಬ ಆತಂಕದ ಕುತೂಹಲ ಸುಖನಿದ್ರೆಯಲ್ಲಿದ್ದವರಿಗೆ ಕಾಡಿತು. ಸದ್ದು ನಮ್ಮ ಕೋಣೆಯಿಂದಲೆ ಎಂದು ಕೊಳ್ಳುತ್ತ ಮೊದಲು ಹಾಸಿಗೆಯಿಂದ ಮೇಲೆದ್ದು ಕುಳಿತ ಪ್ರೋ.ಎಚ್.ಎಂ.ಎಂ ಕಣ್ಣುಜ್ಜಿಕೊಂಡು ನೋಡುತ್ತಾರೆ ನಂಬಲಾಗದ ಆಶ್ಚರ್ಯ, ನಂಬಿದರೂ ಅದು ಈ ವೇಳೆಯಲ್ಲಿ ಏಕೆ? ಎಂಬ ಪ್ರಶ್ನೆ ಮೂಡಿತಂತೆ.
ಅದನ್ನೇ ದಿಟ್ಟಿಸುತ್ತ ಮೌನವಾಗಿ ಧ್ಯಾನಸ್ಥರಂತೆ ಕುಳಿತುಬಿಟ್ಟರಂತೆ, 'ಯಾರು ಎದ್ದರೇನು? ಯಾರು ಮಲಗಿದರೇನು? ತನ್ನ ಕೆಲಸದಲ್ಲಿ ತಾನು ತಲ್ಲಿನನಾಗಿರುವೆ' ಎಂಬಂತೆ ಗೋಡೆಯನ್ನು ಬ್ರಷ್ನಿಂದ ಉಜ್ಜುತ್ತ ಸಾಬೂನು ಮಿಶ್ರಿತ ನೀರನ್ನು ಆಗಾಗ ಸುರಿಯುತ್ತ, ಗೋಡೆಯ ಮೇಲಿನ ಕಲೆ ಮತ್ತು ಕೊಳೆಯನ್ನು ಕೆರೆಯುತ್ತಿದ್ದರು. ಬೀಡಾ, ಗುಟ್ಕಾಗಳಿಂದ ಉಗಿದು ನೋಡಲು ಅಸಹ್ಯವಾಗಿದ್ದ ಕೋಣೆಯ ಎರಡು ಮೂಲೆಗಳನ್ನು ನೋಡುತ್ತಿರುವಂತೆ ಕೆರೆದು ಕೆರೆದು ಶುಚಿಗೊಳಿಸಿಬಿಟ್ಟರು. ಆ ವೇಳೆಗೆ ಕೋಣೆಯಲ್ಲಿ ಮಲಗಿದ್ದವರೆಲ್ಲ ಎದ್ದು ಕುಳಿತು ಎವೆಯಿಕ್ಕದೆ ವಿಗ್ರಹಗಳಂತೆ ಆ ದೃಶ್ಯವನ್ನು ನೋಡುತ್ತಿದ್ದರಂತೆ.
ಮಾತು ಯಾರಿಗೂ ಬೇಡವೆನಿಸಿ ಮೂಕರಾಗಿ ಕುಳಿತಿರುವಾಗಲೆ ಮೂಲೆಗಳ ಸ್ವಚ್ಚತೆ ಮುಗಿದು ನೆಲಕ್ಕೆ ಬ್ರಷ್ ಉಜ್ಜಿದ್ದನ್ನು ಕಂಡು ಎಲ್ಲರೂ ಗಡಿಬಿಡಿಯಿಂದ ಮೇಲೆದ್ದು ಹಾಸಿಗೆಗಳನ್ನು ಮುದುರಿ ಹೊರ ಎಸೆದು ಹಲ್ಲುಜ್ಜವ ಬದಲು ನೆಲ ಉಜ್ಜಲು ತೊಡಗಿದರಂತೆ.
ನಂತರ ಅಂದು ಪರಾ... ಪರಾ... ಕೆರೆದ ವ್ಯಕ್ತಿ ಈಗ ನಿಮ್ಮ ಮುಂದೆಯೇ ಇದ್ದಾರೆ ಎಂದು ಬಿಟ್ಟರು. ಯಾರು ಇರಬಹುದೆಂದು ಅಲ್ಲಿ ನೆರದಿದ್ದವರಿಗೆಲ್ಲ ಆಶ್ಚರ್ಯ, ರೋಮಾಂಚನ ಒಟ್ಟಿಗೆ ಆಯಿತು. ಆಗ ಪ್ರೋ.ಎಚ್.ಎಂ.ಎಂ ವೇದಿಕೆಯ ಮೇಲೆ ಕುಳಿತ್ತಿದ್ದ ಒಬ್ಬರ ಕಡೆ ಕೈತೋರಿಸಿ ಇವರೇ ಆ ವ್ಯಕ್ತಿ ಡಾ.ಶ್ರೀಪದರಾಯ್ ಎಂದರು. ಶ್ರೀಯುತರು ಅಮೇರಿಕಾದಲ್ಲಿ ವೈದ್ಯರಾಗಿದ್ದು ಅವಿವಾಹಿತರಾಗಿಯೇ ಬದುಕತ್ತ ತಮ್ಮ ದುಡಿಮೆಯ ಹಣವನ್ನೆಲ್ಲ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ನಮ್ಮೂರಿನ ಸಮುದಾಯ ಕೇಂದ್ರಕ್ಕೆ ಇವರೆ ಬಣ್ಣದ ಟಿ.ವಿ.ಕೊಡಿಸಿರುವವರು. ಅವರ ಹೆಗಲಲ್ಲಿ ಯಾವಾಗಲೂ ಒಂದು ಜೋಳಿಗೆ ನೇತು ಹಾಕಿಕೊಂಡಿರುವುದನ್ನು ನೀವು ಗಮನಿಸಿರಬೇಕು. ಅದರೊಳಗೆ ಒಂದು ಪೊರಕೆ, ನೆಲ ಉಜ್ಜುವ ಬ್ರಷ್, ಕಸ ಎತ್ತುವ ಕೈಮರ ಇರುತ್ತವೆ ಎಂದು ಪರಿಚಯಿಸಿದರು.
ಮುಂದುವರೆದು ಅವರು ಎಲ್ಲಿಗೇ ಹೋಗಲಿ ಅಲ್ಲಿ ಕಸಕಡ್ಡಿ ಕಂಡುಬಂದರೆ ಕೂಡಲೆ ಜೋಳಿಗೆಯಿಂದ ಪೋರಕೆ ಹೊರತೆಗೆದು ಕಸಗೂಡಿಸಿ ಕೈಮರದಿಂದ ಅದನ್ನು ಕಸದ ತೊಟ್ಟಿಗೆ ಹಾಕಿ ಬರುತ್ತಾರೆ ಎಂದು ಹೇಳಿದರು. ಹುಡುಗರಾದ ನಮಗೆಲ್ಲ 'ವೈದ್ಯರಾಗಿಯೂ ಯಾಕೆ ಹೀಗೆಲ್ಲ ಬೀದಿಗುಡಿಸುತ್ತಾರೆ?' ಎಂಬುದು ಆಗ ಅರ್ಥವಾಗಿರಲಿಲ್ಲ.
ಪ್ರೋಫೆಸರ್ ಪರಿಚಯಿಸಿದ ಮೇಲೆ ಡಾ.ಶ್ರೀಪಾದರಾಯ್ರನ್ನು ನಾವೆಲ್ಲ ಕುತೂಹಲದಿಂದ ನೋಡುತ್ತಿದ್ದೆವು. ಸುಮಾರು ಅರವತ್ತು ವರ್ಷದ ಅವರು ನೋಡಲು ಭಾರತೀಯ ಸಂತರಂತೆ ಇದ್ದರು. ಉದ್ದಕೂದಲು ಬಿಟ್ಟು ಮೀಸೆ ತಗೆದು ಸಡಿಲವಾದ ಖಾದಿ ಜುಬ್ಬ ತೊಟ್ಟಿರುತ್ತಿದ್ದರು. ಯಾರೊಡನೆಯೂ ಹೆಚ್ಚು ಮಾತಾನಾಡಿದ್ದನ್ನು, ದೀರ್ಘವಾದ ಭಾಷಣ ಮಾಡಿದ್ದನ್ನು ನಾನು ಕಂಡಿರಲಿಲ್ಲ. ಭಾಷಣಕ್ಕಿಂತಲೂ ಕ್ರಿಯೆಗೆ ಪ್ರಾಮುಖ್ಯತೆ ಕೊಡುವ ಇಂಥ ವ್ಯಕ್ತಿಗಳ ಒಡನಾಟದೊಂದಿಗೆ ಹಿಂದುಳಿದ ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಡಾ.ಹೆಚ್.ಎಂ.ಎಂ ಒಂದು ಆಂದೋಲನದಂತೆ ಕೈಗೊಂಡದ್ದು ಅವಿಸ್ಮರಣೀಯ.
ಬಾಲ್ಯದ ಆ ಘಟನೆಗಳು ನನ್ನ ಮೇಲೆ ತುಂಬಾ ಪರಿಣಾಮವನ್ನು ಬೀರಿವೆ. ಎಷ್ಟೆಂದರೆ, ಇಂದು ನಾನು ಕೆಲಸ ಮಾಡುವ ಕಾಲೇಜಿನ ಕೊಠಡಿಗಳಲ್ಲಿ ಜಾಡು, ಕಸ ತುಂಬಿದ್ದರೆ ಪೊರಕೆ ಹಿಡಿದು ವಿದ್ಯಾಥರ್ಿಗಳ ಜೊತೆಯಲ್ಲಿ ಎಲ್ಲವನ್ನು ಸ್ವಚ್ಚಗೊಳಿಸಿಬಿಡುತ್ತೇವೆ. ಬಸ್ನಿಲ್ದಾಣ ಮತ್ತು ಊರಿನ ರಸ್ತೆಗಳಲ್ಲಿ ಹರಡಿರುವ ಕಸವನ್ನು ನೋಡಿದಾಗ ಸ್ವಚ್ಚಗೊಳಿಸುವ ಮನಸ್ಸಾಗುತ್ತದೆ. ಆದರೆ ಜನ ಏನೆಂದು ಕೊಳ್ಳುವರೊ! ಎಂಬ ಸಂಕೋಚ ಕಾಡುತ್ತದೆ. ಇಂಥ ಹಿಂಜರಿಕೆಯನ್ನು ಮೀರಿ ಪ್ರೋ.ಹೆಚ್.ಎಂ.ಎಂ ಮತ್ತು ಡಾ.ಶ್ರೀಪಾದರಾಯ್ರಂಥವರ ಎದೆಗಾರಿಕೆಯನ್ನು ಸಮಾಜಕಾರ್ಯದಲ್ಲಿ ರೂಢಿಸಿಕೊಳ್ಳುವ ಬಗೆ ಹೇಗೆ ಎಂದು ಆಲೋಚಿಸುತ್ತಲೇ ಕಾಲಹರಣ ಮಾಡಿದರೆ ಬಂದ ಭಾಗ್ಯವಾದರು ಏನು?
ಡಾ.ಎಂ.ಹಾಲಪ್ಪ ಕುಂಬಳಕುಂಟೆ
ಕನ್ನಡ ಉಪನ್ಯಾಸಕರು
ಸಕರ್ಾರಿ ಪದವಿ ಪೂರ್ವ ಕಾಲೇಜು
ಹುಳಿಯಾರು -ಕೆಂಕೆರೆ (ಪೋಸ್ಟ್)
ಚಿಕ್ಕನಾಯಕನಹಳ್ಳಿ (ತಾಲ್ಲೊಕು)
ತುಮಕೂರು(ಜಿಲ್ಲೆ)
ಮೊ:-9742843661
Tumba chennagide.
ReplyDeletethank you for your feed back
ReplyDelete